ಮಿಲ್ಲರ್, ಆರ್ಥರ್
1915. ಅಮೆರಿಕದ ಪ್ರಸಿದ್ಧ ನಾಟಕಕಾರ. ವಿಶಾಲ ಸಾಮಾಜಿಕಪ್ರಜ್ಷೆ ಇದ್ದು ಬದ್ಧತೆ ಹಾಗೂ ಹೊಣೆಯ ಕಲ್ಪನೆಯ ಸುತ್ತ ತನ್ನ ನಾಟಕಗಳನ್ನು ರಚಿಸಿದ. 17 ಅಕ್ಟೋಬರ್ 1915ರಂದು ನ್ಯೂಯಾರ್ಕಿನಲ್ಲಿ ಹುಟ್ಟಿದ. ಮಿಷಿಗನ್ ವಿಶ್ವವಿದ್ಯಾಲಯದಿಂದ 1938ರಲ್ಲಿ ಪದವಿ ಗಳಿಸಿದ. ಉಗ್ರಾಣವೊಂದರಲ್ಲಿ ದುಡಿದು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಬೇಕಾದ ಸ್ಥಿತಿಯಲಿದ್ದ ಇವನು ಶಾಲೆಯಲ್ಲಿ ಮುಂದೆ ಇರಲಿಲ್ಲ. ಆದರೆ ಆ ಅವಧಿಯಲ್ಲಿಯೇ ನಾಟಕಗಳ ರಚನೆಗೆತೊಡಗಿ ಅನೇಕ ಬಹುಮಾನಗಳನ್ನು ಗಳಿಸಿದ. ವಿದ್ಯಾಭ್ಯಾಸದ ಅನಂತರ 1914-47ರ ನಡುವೆ ರೇಡಿಯೋ ನಾಟಕಗಳ ರಚನೆಯಲ್ಲಿ ತೊಡಗಿದ್ದ. ಮುಂದೆ ಅನೇಕ ಉತ್ತಮ ನಾಟಕಗಳನ್ನು ಬರೆದು ಹಲವು ಪ್ರಶಸ್ತಿಗಳನ್ನು ಪಡೆದ. ಕತೆ. ಕಾದಂಬರಿ ಸಿನಿಮಾಕತೆ, ವರದಿ, ಲೇಖನಗಳು; ಸಂದರ್ಶಗಳು -ಹೀಗೆ ಹಲವು ಪ್ರಕಾರಗಳಲ್ಲಿ ಸಾಹಿತ್ಯ ಕೃಷಿ ನಡೆಸಿದ ಕಮ್ಯುನಿಸ್ಟ್ ಎಂಬ ಆರೋಪಕ್ಕೊಳಗಾಗಿ 1956-58 ಅವಧಿಯಲ್ಲಿ ವಿಚಾರಣೆ ಎದುರಿಸಿದ. ಈತ 1940ರಲ್ಲಿ ಮೇರಿ ಗ್ರೇಸಿ ಸ್ಲಾಟರಿ ಎಂಬಾಕೆಯನ್ನು ವಿವಾಹವಾಗಿದ್ದ 1955ರಲ್ಲಿ ವಿವಾಹ ವಿಚ್ಛೇದನ ಪಡೆದು 1956ರಲ್ಲಿ ಪ್ರಸಿದ್ಧ ಹಾಲಿವುಡ್ ಚಿತ್ರತಾರೆ ಮರ್ಲಿನ್ ಮನ್ರೋಳನ್ನು ವಿವಾಹವಾದ. 1960ರಲ್ಲಿ ಆಕೆಯೊಂದಿಗೆ ವಿವಾಹವಿಚ್ಛೇದನ ಪಡೆದ. 1965ರಲ್ಲಿ ಇವನನ್ನು ಪಿ. ಇ. ಎನ್. ನ ಅಂತರರಾಷ್ಟ್ರೀಯ ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿ ಗೌರವಿಸಲಾಯಿತು. ಆಲ್ ಮೈ ಸನ್ಸ್ (1947). ಡೆತ್ ಆಫ್ ಎ ಸೇಲ್ಸ್‍ಮನ್ (1949). ಎ ವ್ಯೂ ಫ್ರಂ ದಿ ಬ್ರಿಡ್ಜ್ (1955). ದಿ ಕ್ರೂಸಿಬಲ್ (1953). ಇನ್‍ಸಿಡೆಂಟ್ ಅಟ್ ವಿಚಿ (1064). ಆಫ್ಟರ್ ದಿ ಫಾಲ್ (1964)- ಇವು ಇವನ ಮುಖ್ಯ ನಾಟಕಗಳು. 

ದಿ ಮ್ಯಾನ್ ಹೂ ಹ್ಯಾಡ್ ಆಲ್ ದಿ ಲಕ್ (1944) ರಂಗಪ್ರಯೋಗ ಕಂಡ ಇವನ ಮೊದಲ ನಾಟಕ. ಇದು ನಾಲ್ಕು ಪ್ರಯೋಗಗಳನ್ನು ಮಾತ್ರ ಕಂಡಿತು. ಇವನಿಗೆ ಕೀರ್ತಿ ತಂದ ನಾಟಕ ಆಲ್ ಮೈ ಸನ್ಸ್. ಇದು 1947ರಲ್ಲಿ ಪ್ರದರ್ಶನಗೊಂಡು ನ್ಯೂಯಾರ್ಕ್ ನಾಟಕ ವಿಮರ್ಶಕರ ಪ್ರಶಸ್ತ್ರಿಪಡೆದು ಅಂತರರಾಷ್ಟೀಯ ಖ್ಯಾತಿ ಗಳಿಸಿತು. ಪ್ರಪಂಚಾದ್ಯಂತ ಈ ನಾಟಕದ ಅನೇಕ ಪ್ರಯೋಗಗಳು ನಡೆದವು. ವಿಮಾನದ ದೋಷಪೂರ್ಣ ಬಿಡಿಭಾಗಗಳ ತಯಾರಕನೊಬ್ಬನ ಮಗನೇ ಅದರಿಂದಾದ ಅನಾಹುತಕ್ಕೆ ಬಲಿಯಾಗುವುದು ಈ ನಾಟಕದ ವಸ್ತು. ಇವನ ಮಹತ್ತ್ವಾಕಾಂಕ್ಷೆಯ ಕೃತಿಯೆಂದು ಖ್ಯಾತವಾಗಿರುವ ನಾಟಕ ಡೆತ್ ಆಫ್ ಎ ಸೇಲ್ಸ್ ಮನ್. ಲೋಮನ್ ಎಂಬ ಸಂಚಾರಿ ಮಾರಾಟಗಾರನೊಬ್ಬ ಕೇವಲ ಜನಪ್ರಿಯತೆ ಹಾಗೂ ಭೌತಿಕಸುಖವೇ ಜೀವನದ ಪರಮ ಗುರಿ ಎಂದು ತಿಳಿದುಕೊಂಡಿದ್ದವನು ಕಡೆಯಲ್ಲಿ ಭಗ್ನಮನಸ್ಸನಾಗಿ ಆತ್ಮಹತ್ಯೆಮಾಡಿಕೊಂಡು ಸಾವಿಗೀಡಾಗುವುದು ಈ ನಾಟಕದ ವಸ್ತು. ಇದರ ನಿರ್ವಹಣೆಯಲ್ಲಿ ವಾಸ್ತವಿಕತೆ ಮತ್ತು ಸಂಕೇತಗಳನ್ನು ಬೆಸೆದು ಸೂಕ್ಷ್ಮವಾದ ಮನೋವಿಶ್ಲೇಷಣೆಯನ್ನೂ ತಂದ ಮಿಲ್ಲರ್ ಅಮೆರಿಕೆಯ ಪ್ರಮುಖ ನಾಟಕಕಾರರ ಪೈಕಿ ಒಬ್ಬನೆಂದು ಮಾನ್ಯನಾದ. ಸಾಮಾನ್ಯ ಮನುಷ್ಯನೇ ಆಧುನಿಕ ದುರಂತನಾಯಕ ಎಂಬ ಮಿಲ್ಲರ್‍ನ ನಂಬಿಕೆಗೆ ಈ ನಾಟಕ ಮಾದರಿಯಂತಿದೆ. ಈ ನಾಟಕಕ್ಕೆ ಪುಲಿಟ್ಜರ್ ಬಹುಮಾನದ ಜೊತೆಗೆ ಅನೇಕ ಬಹುಮಾನಗಳೂ ಲಭ್ಯವಾದವು. ದಿ ಕ್ರೂಸಿಬಬಲ್ ಕೂಡ ಇವನ ಉತ್ತಮ ನಾಟಕವೆಂದು ಖ್ಯಾತವಾಗಿದೆ. ಅಮೆರಿಕನ್ ಇತಿಹಾಸದಲ್ಲಿ 1692ರಲ್ಲಿದ್ದ ಸೇಲೆಮ್ ಮಾಟಮಂತ್ರ ವಿಷಯವನ್ನು ಆಧರಿಸಿ ರಚಿತವಾದ ದುರಂತ ನಾಟಕವಿದು. ಇವನ ಪತ್ನಿ ಮರ್ಲಿನ್ ಮನ್ರೋ ನಿಧನದ ಅನಂತರ ಬಂದ ಆಫ್ಟರ್ ದಿ ಫಾಲ್ (1964) ಎಂಬ ನಾಟಕದಲ್ಲಿ ಇವನ ಆತ್ಮಕತೆಯ ಅನೇಕ ಸಂಗತಿಗಳು ನಾಟಕೀಕರಣಗೊಂಡಿವೆ. ಮುಖ್ಯವಾಗಿ ಮರ್ಲಿನ್ ಮನ್ರೋಳ ಜೊತೆಗಿನ ದಾಂಪತ್ಯ ಜೀವನದ ವಿವರಗಳು ಕಂಡುಬರುತ್ತವೆ. ಕಾದಂಬರಿಯ ದಟ್ಟ ಅನುಭವ, ಜಾಗೃತಿ ಮತ್ತು ಸಂಕೀರ್ಣತೆಯನ್ನು ರಂಗದ ಮೇಲೆ ತರಬೇಕೆಂಬುದು ಮಿಲ್ಲರನ ಉದ್ದೇಶಗಳ ಪೈಕಿ ಒಂದಾಗಿತ್ತು. ಈ ನಾಟಕದಲ್ಲಿ ಇವನ ಉದ್ದೇಶ ಬಹುಮಟ್ಟಿಗೆ ಸಾಧಿಸಿದೆ. ಇನ್‍ಸಿಡೆಂಟ್ ಅಟ್ ವಿಚಿ ಎಂಬ ನಾಟಕ ಯಹೂದೀ ವಿರೋಧಿ ನೀತಿಯ ಕಾರಣ ಮತ್ತು ಹೊಣೆಯನ್ನು ಪರಿಶೋಧಿಸುವಂಥದ್ದು.

ಎ ಮೆಮೊರಿ ಆಫ್ ಟೂ ಮಂಡೇಸ್ (1955). ದಿ ಪ್ರೈಸ್ (1968). ದಿ ಕ್ರಿಯೇಷನ್ ಆಫ್ ದಿ ವಲ್ರ್ಡ್ ಅಂಡ್ ಅದರ್ ಬಿಸಿನೆಸ್ (1972). ಆ್ಯನ್ ಎನೆಮಿ ಆಫ್ ದಿ ಪೀಪಲ್ -ಇವು ಇವನ ಇತರ ನಾಟಕಗಳು. ದಿ ಪ್ರೈಸ್ ಎಂಬುದು ಹಾಸ್ಯನಾಟಕ. ಕಡೆಯದು ಇಬ್ಸನ್ ನಾಟಕವೊಂದರ ಅಳವಡಿಕೆ. 

ಈತ ಕೆಲವು ಕಾದಂಬರಿಗಳನ್ನೂ ಬರೆದಿದ್ದಾನೆ. ಇವನಿಗೆ ಸಾರ್ವಜನಿಕ ಜೀವನದಲ್ಲಿ ಮೊದಲು ಯಶಸ್ಸು ಗಳಿಸಿಕೊಟ್ಟಿದ್ದು ಕಾದಂಬರಿಯೇ ಸಿಪಾಯಿ ಜೀವನ ಕುರಿತು ಸಿಚುಯೇಷನ್ ನಾರ್ಮಲ್ (1944) ಎಂಬ ವರದಿಯ ಅನಂತರ ಬಂದ ಫೋಕಸ್ (1945) ಯಹೂದೀ ವಿರೋಧಿ ನೀತಿಯ ಪರಿಣಾಮಗಳನ್ನು ಶೋಧಿಸುವ ಇವನ ಖ್ಯಾತಕಾದಂಬರಿ. ತನ್ನ ಹೆಂಡತಿ ಮರ್ಲಿನ್ ಮನ್ರೋಗಾಗಿ ಬರೆದ ಸಿನಿಮಾ ಕಾದಂಬರಿ ದಿ ಮಿಸ್ ಫಿಟ್ಸ್ (1961). ಆಯ್ ಡೋಂಟ್ ನೀಡ್ ಯು ಎನಿಮೋರ್ (1967) ಎಂಬುದು ಕಥಾ ಸಂಕಲನ. ಇಂಜ್ ಮೊರಾತ್ ಎಂಬ ಲೇಖಕನೊಡಗೂಡಿ ಬರೆದ ಇನ್ ರಷಿಯಾ (1969) ಎಂಬುದು ಪ್ರವಾಸ ಕಥನ. ಕಿಡ್‍ನ್ಯಾಪ್ಡ್ (1969) ಇವನ ಇನ್ನೊಂದು ಕೃತಿ. 					
 (ಬಿ.ಎಸ್.ಪಿ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ